ಬಿಲ್ಪತ್ರೆ
ರೂಟೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ವೃಕ್ಷ. ಬಿಲ್ವ ಪರ್ಯಾಯ ನಾಮ. ಈಗಲ್ ಮಾರ್ ಮೆಲೋಸ್ ಶಾಸ್ತ್ರೀಯ ನಾಮ. ಭಾರತಾದ್ಯಂತ ಇದು ಕಾಣದೊರೆಯುತ್ತದೆ. ಸ್ವಾಭಾವಿಕವಾಗಿ ಕಾಡಿನ ಅಂಚುಗಳಲ್ಲಿ ಪಾಳುನೆಲಗಳಲ್ಲಿ ಬೆಳೆಯುವ ಇದನ್ನು ದೇವಾಲಯಗಳ ಬಳಿ ನೆಟ್ಟು ಬೆಳೆಸುವುದೂ ಉಂಟು.

	ಇದು ಸುಮಾರು 6-10 ಮೀ ಎತ್ತರಕ್ಕೆ ಬೆಳೆಯುವ ಗಟ್ಟಿ ಕಾಂಡದ ಮರ. ಚಳಿಗಾಲದಲ್ಲಿ ಇದರ ಎಲೆಗಳು ಉದುರಿ ಮಾರ್ಚ್-ಏಪ್ರಿಲ್ ವೇಳೆಗೆ ಹೊಸ ಎಲೆಗಳು ಹುಟ್ಟುವುವು. ಎಲೆಗಳು ತಲಾ ಮೂರು ಕಿರುಪತ್ರಗಳಿಂದ ಕೂಡಿದ ಸಂಯುಕ್ತ ಮಾದರಿಯವು. ಎಲೆಗಳ ಕಕ್ಷಗಳಲ್ಲಿ ಚೂಪಾದ ಮುಳ್ಳುಗಳುಂಟು (ಬೆಳೆಸಿದ ಮರಗಳಲ್ಲಿ ಮುಳ್ಳುಗಳಿಲ್ಲದಿರ ಬಹುದು). ಮೇ-ಜುಲೈ ಅವಧಿಯಲ್ಲಿ ಹಸಿರು ಮಿಶ್ರ ಹಳದಿ ಬಣ್ಣದ ಹೂಗಳು ಅರಳುವುವು. ಡಿಸೆಂಬರ್ ವೇಳೆಗೆ ಕಾಯಿಗಳು ಬಲಿಯುತ್ತದೆ. ಕಾಯಿಗಳು 5-10 ಸೆಂಮೀ ವ್ಯಾಸದ ಗುಂಡನೆಯ ಚಂಡಿನಂತಿವೆ. ಬಣ್ಣ ಹಳದಿ ಇಲ್ಲವೆ ಬೂದಿ. ಇವಕ್ಕೆ ಗಟ್ಟಿಯಾದ ಸಿಪ್ಪೆಯೂ ನಯವಾದ ಹಳದಿ ಬಣ್ಣದ ಹಾಗೂ ನವುರಾದ ಸುವಾಸನೆಯುಳ್ಳ ತಿರುಳೂ ಉಂಟು. ಬೀಜಗಳು ಹಲವಾರಿದೆ. ತಿರುಳು ಲೋಳೆಲೋಳೆಯಾಗಿದ್ದು ಸಿಹಿಯಾಗಿದೆ. 

	ಬಿಲ್ಪತ್ರೆ ಶಿವನ ಪೂಜೆಗೆ ಶ್ರೇಷ್ಟವೆನಿಸಿದ್ದು ಹಿಂದೂಗಳಿಗೆ ಇದರ ಮರ ಪವಿತ್ರ ವೃಕ್ಷವಾಗಿದೆ. 

	ಬಿಲ್ಪತ್ರೆಗೆ ಹಲವಾರು ಉಪಯುಕ್ತ ಗುಣಗಳುಂಟು. ಇದರ ಕಾಂಡ ಹಾಗೂ ಎಳೆಯ ಕಾಯಿಗಳಿಂದ ಒಳ್ಳೆಯ ಗೋಂದು ಪಡೆಯಬಹುದು. ವರ್ಣಚಿತ್ರಗಳಿಗೆ ಹೊಳಪುಕೊಡುವ ಸಾಮಗ್ರಿಯಾಗಿಯೂ ಉತ್ತಮ ಅಂಟುವಸ್ತುವಾಗಿಯೂ ಇದರ ಉಪಯೋಗ ಉಂಟು. 

	ಮಾಗಿದ ಹಣ್ಣನ್ನು ತಿನ್ನುವುದುಂಟು. ಕಾಯಿಯಿಂದ ಉಪ್ಪಿನಕಾಯಿ ತಯಾರಿಸಬಹುದು. ಬಿಲ್ಪತ್ರೆಯ ಷರಬತ್ ಒಳ್ಳೆಯ ತಂಪುಪಾನೀಯ. ಹಣ್ಣಿನ ಮಾರ್ ಮಲೇಡ್ ಆಮಶಂಕೆಗೆ ಉತ್ತಮ ಉಪಶಮನ. ಬೇರಿನ ಹಾಗೂ ಕಾಂಡದ ತೊಗಟೆಯನ್ನು ವರಸೆಜ್ವರಕ್ಕೆ ಔಷಧಿಯಾಗಿ ಬಳಸುವುದಿದೆ. ತಿರುಳನ್ನು ತಲೆಯ ಹೊಟ್ಟು ಹೋಗಿಸಲು ಉಪಯೋಗಿಸಲಾಗುತ್ತದೆ.			
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ